ಇಮಾಮ್

ಅರಬ್ಬೀಭಾಷೆಯಲ್ಲಿ ಈ ಪದಕ್ಕೆ ನಾಯಕ ಅಥವಾ ಮಾರ್ಗದರ್ಶಿ ಎಂಬರ್ಥಗಳಿವೆ. ಈಗ ಸಾಮಾನ್ಯವಾಗಿ ಒಬ್ಬ ಧಾರ್ಮಿಕ ಮುಂದಾಳು ಎಂಬರ್ಥದಲ್ಲಿ ಬಳಕೆಯಲ್ಲಿದೆ. ದೈವನಿಯೋಜಿತ ಧಾರ್ಮಿಕ ಮುಖಂಡನನ್ನು ಸೂಚಿಸಲೂ ಪ್ರಯುಕ್ತವಾಗುತ್ತದೆ. ಅಲ್ಲದೆ ಪ್ರಮುಖ ದೈವಶಾಸ್ತ್ರಜ್ಞನ ಬಿರುದನ್ನೂ ಸೂಚಿಸುತ್ತದೆ. ವಿಶೇಷವಾಗಿ ಆತ ಪ್ರಾರ್ಥನೆಗಳನ್ನು ನಡೆಸಿಕೊಡುವ ಧರ್ಮಜ್ಞ. ಮಸೀದಿಯಲ್ಲಿ ಅಥವಾ ಮತ್ತಾವುದೇ ಪ್ರಾರ್ಥನಾಕೂಟದಲ್ಲಿ ಆತ ಪ್ರಾರ್ಥನಾಮಗ್ನ ವ್ಯಕ್ತಿಗಳ ಸಾಲುಗಳ ಅಗ್ರಭಾಗದಲ್ಲಿ ನಿಲ್ಲುತ್ತಾನೆ, ಜುಹುರ್ (ಮಧ್ಯಾಹ್ನದ) ಮತ್ತು ಅಸರ್ (ಸಂಧ್ಯಾಪೂರ್ವದ) ಪ್ರಾರ್ಥನೆಗಳ ಸಂದರ್ಭದಲ್ಲಿ ಕುರಾನಿನ ಪದ್ಯಗಳನ್ನು ಮೌನವಾಗಿ ಪಠಿಸುತ್ತಾನಲ್ಲದೆ ಬೆಳಗಿನ, ಸಂಜೆಯ ಹಾಗೂ ರಾತ್ರಿಯ ಪ್ರಾರ್ಥನೆಗಳ ಸಂದರ್ಭದಲ್ಲಿ ಕುರಾನಿನ ಪದ್ಯಗಳನ್ನು ಗಟ್ಟಿಯಾಗಿ ಪಠಿಸುತ್ತಾನೆ, ಪ್ರತಿ ಮಸೀದಿಯಲ್ಲೂ ಒಬ್ಬ ಇಮಾಮ್ ಇರುತ್ತಾನೆ. ಮುಸ್ಲಿಂ ಜನಾಂಗದವರ ನ್ಯಾಯ ಮತ್ತು ನೀತಿಗಳ ಉಸ್ತುವಾರಿ ನಡೆಸಿ ನೀತಿ ತಪ್ಪಿ ನಡೆಯದಂತೆ ಮಾರ್ಗದರ್ಶನ ಮಾಡುವುದೂ ಈತನ ಕೆಲಸ. 						
  (ಜಿ.ಎಂ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ